ಗಂಗೂಬಾಯಿ ಹಾನಗಲ್
1913-. ಹಿಂದೂಸ್ತಾನಿ ಸಂಗೀತಕ್ಷೇತ್ರದಲ್ಲಿ ಅಖಿಲ ಭಾರತ ಖ್ಯಾತಿಯನ್ನು ಪಡೆದ ಅಗ್ರಗಣ್ಯ ಕಲಾವಿದರಲ್ಲಿ ಒಬ್ಬರು. ಕಿರಾಣೆ ಘರಾಣೆಯ ಹಿರಿಯಕ್ಕ. ಸಂಗೀತದಲ್ಲಿ ಸಾಕಷ್ಟು ಅಭಿರುಚಿ ಮತ್ತು ಪರಿಶ್ರಮವಿದ್ದ ಮನೆತನದಲ್ಲಿ ಮಾರ್ಚ್ 5, 1913ರಂದು ಧಾರವಾಡದಲ್ಲಿ ಜನಿಸಿದರು. ಇವರ ತಾಯಿ ಅಂಬಾಬಾಯಿ ಪ್ರಸಿದ್ಧ ಕರ್ನಾಟಕಿ ಗಾಯಕಿ. 
ಗಂಗೂಬಾಯಿಯವರ ಪಾಂಕ್ತ ಸಂಗೀತ ಶಿಕ್ಷಣಕ್ಕೆ ನೆರವಾದವರು ತಾಯಿ ಅಂಬಾಬಾಯಿ, ಸೋದರಮಾವ ರಾಮಣ್ಣ ಹಾನಗಲ್ ಅವರು. ಹಿಂದೂಸ್ತಾನಿ ಸಂಗೀತದ ಗಾಳಿ ಉತ್ತರ ಕರ್ನಾಟಕದಲ್ಲಿ ಬೀಸುತ್ತಿದ್ದ ಕಾಲ. ಗಂಗೂಬಾಯಿಗೆ ಅದರತ್ತ ಒಲವಿರುವುದನ್ನು ಕಂಡು ಮಗಳಿಗೆ ಹಿಂದೂಸ್ತಾನಿ-ಕರ್ನಾಟಕಿ ಗೋಜಲು ಬೇಡವೆಂದು ಅಂಬಾಬಾಯಿ ಹಾಡುವುದನ್ನು ಬಿಟ್ಟರು. ಎಳೆವಯಸ್ಸಿನಲ್ಲೇ ಗಂಗೂಬಾಯಿಯವರು ಬೆಳಗಾಂವಿ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಾಗತಗೀತೆಯನ್ನು ಹಾಡಿ (1924) ಜನರ ಮೆಚ್ಚುಗೆ ಗಳಿಸಿದ್ದರು. ಕುಟುಂಬದ ಹಿತೈಷಿ ದತ್ತೋಪಂತ ದೇಸಾಯಿ ಭಾತಖಂಡೆ ರಚಿಸಿದ ಗ್ರಂಥಗಳನ್ನು ಓದಿಕೊಂಡು ಗಂಗೂಬಾಯಿಗೆ ಕಲಿಸಲಾರಂಭಿಸಿದರು. ನಂತರ, ಕಿನ್ನರಿ ವಿದ್ವಾನ್ ಹುಲಗೂರು ಕೃಷ್ಣಾಚಾರ್ಯರನ್ನು ಗುರುಗಳೆಂದು ಗೊತ್ತು ಮಾಡಿದರು. ಅವರು ಒಂದು ವರ್ಷದಲ್ಲಿ ಸುಮಾರು 60 ದೃತ್ ಚೀಜುಗಳನ್ನು ಕಲಿಸಿದರು. ಇಪ್ಪತ್ತರ ಹರೆಯದಲ್ಲಿ ಗಂಗೂಬಾಯಿಗೆ ಕುಂದಗೋಳದ ಕಿರಾಣ ಘರಾಣೆಯ ಖ್ಯಾಲ್ ಗಾಯಕ ರಾಮಭಾವು ಕುಂದಗೋಳಕರರ ಕೃಪೆ ಒದಗಿತು. ಅವರು ಕರ್ಣಾಟಕ ಮಹಾರಾಷ್ಟ್ರಗಳಲ್ಲಿ ಸವಾಯಿ ಗಂಧರ್ವರೆಂದು ಖ್ಯಾತರಾಗಿದ್ದರವರು; ಕಿರಾಣಾ ಘರಾಣಾದ ಖ್ಯಾತ ಅಬ್ದುಲ್ ಕರೀಂಖಾನರ ಶಿಷ್ಯರು. ಸ್ವರದ ಕೆಲಸದಲ್ಲಿ, ಶ್ರುತಿಪಾವಿತ್ರ್ಯದಲ್ಲಿ, ಖ್ಯಾಲ್ ಗಾಯನದ ಸೊಗಸುಗಾರಿಕೆಯಲ್ಲಿ ಕಿರಾಣಾ ಘರಾಣಾ ಅಂದಿಗೆ ತನ್ನದೇ ಆದ ಪರಂಪರೆಯನ್ನು ಸ್ಥಾಪಿಸಿತ್ತು. ಗಂಗೂಬಾಯಿ ಹುಬ್ಬಳಿಯಲ್ಲಿದ್ದುಕೊಂಡು ದಿನವೂ ಕುಂದಗೋಳಕ್ಕೆ ಹೋಗಿಬರುತ್ತ ಸಂಗೀತಾಭ್ಯಾಸ ನಡೆಸಿದರು. ಸಾಧನೆಯಲ್ಲಿ ಗಂಗೂಬಾಯಿಯವರದು ಸೋಲದ ಶ್ರದ್ಧೆ. ಕ್ರಮೇಣ ಪೂರಿಯಾಧನಾಶ್ರೀ, ತೋಡಿ, ಅಸಾವರಿ, ಶುದ್ಧ ಕಲ್ಯಾಣ, ಮಾಲಕಂಸ, ಮಿಯಾಮಲ್ಹಾರ, ದರ್ಬಾರಿ ಕಾನಡಾ, ತೋಡಿ, ಮುಲ್ತಾನಿ, ಅಢಾಣಾ ಮೊದಲಾದ ರಾಗಗಳನ್ನವರು ಹಸ್ತಗತ ಮಾಡಿಕೊಂಡರು.

1942ರಲ್ಲಿ ಸವಾಯಿ ಗಂಧರ್ವರ ಆರೋಗ್ಯ ಹದಗೆಟ್ಟಿತು. ಇನ್ನು ಹಾಡುವಂತಿಲ್ಲವೆಂದು ವೈದ್ಯರ ತಾಕೀತು. ಗಂಗೂಬಾಯಿ ತಮ್ಮ ಮನೆಯಲ್ಲೇ ಗುರುಗಳನ್ನು ಇರಿಸಿಕೊಂಡು ಆರೈಕೆ ಮಾಡಿದರು. ಹಾಡುವುದು ನಿಷಿದ್ಧ. ಆದರೂ ಒಮ್ಮೊಮ್ಮೆ ಅನಿರೀಕ್ಷಿತವಾಗಿ ತಮ್ಮ ನೆಚ್ಚಿನ ಶಿಷ್ಯೆಗೆ ಕಲಿಸುವುದಿತ್ತು. ಹಾಗೆ ಕಲಿತ ಅಪೂರ್ವ ರಾಗಗಳು ಅಲೈಯಾ ಬಿಲಾವಲ್, ಮಾರು ಬಿಹಾಗ್, ಸುಹಾ ಮೊದಲಾದವು.

	ಗಂಗೂಬಾಯಿಯವರು ಸ್ವಭಾವತಃ ಸರಳ ಮನೋಧರ್ಮದವರು. ಆಡಂಬರ ಅವರಿಗೆ ಸಲ್ಲದು. ಮೊದಲಿಗೆ ಭಾರತದಲ್ಲಿ ನಾಲ್ಕೇ ಆಕಾಶವಾಣಿ ಕೇಂದ್ರಗಳಿದ್ದವು. ಮುಂಬಯಿ, ಕಲ್ಕತ್ತಾ, ದಿಲ್ಲಿ, ಮದ್ರಾಸ್. ಮುಂಬಯಿ ಆಕಾಶವಾಣಿ ಕೇಂದ್ರ ಹಿಂದುಸ್ತಾನಿ ಸಂಗೀತ ಪ್ರಸಾರಣದಲ್ಲಿ ಮುಂಚೂಣಿಯಲ್ಲಿತ್ತು. ಒಂದು ಬೆಳಿಗ್ಗೆ ಹೀರಾಬಾಯಿ ಬಡೋದೆಕರ ಹಾಡುವುದಿತ್ತು. ಆಗೆಲ್ಲ ಸಜೀವ ಬಿತ್ತರಿಕೆಗಳು. ಹೀರಾಬಾಯಿ ಕೊನೆಯ ಗಳಿಗೆಯಲ್ಲಿ ಅನಾರೋಗ್ಯ ಪೀಡಿತರಾದರು. ಕೇಂದ್ರ ನಿರ್ದೇಶಕರಿಗೆ ಏನು ಮಾಡುವುದೆಂದು ತೋಚದಾಯಿತು. ಸರಿಯಾಗಿ ಅದೇ ಸಮಯಕ್ಕೆ ಗಂಗೂಬಾಯಿ ಆ ಪ್ರಸಾರನಿಲಯಕ್ಕೆ ಅವಕಾಶ ಕೋರಲು ಬಂದಿದ್ದರು. ಬೇರೆ ಉಪಾಯಗಾಣದೆ ಅವರನ್ನೇ ಹಾಡಲು ಕೇಳಿಕೊಳ್ಳಲಾಯಿತು. ಒಂದು ಸಮಸ್ಯೆ ಇತ್ತು. ಅವರು ಹೇಗೆ ಹಾಡುವರೆಂಬುದು ಗೊತ್ತಿರಲಿಲ್ಲ. ಆದರೆ, ನಂತರ ಸಂಭವಿಸಿದುದು ಇತಿಹಾಸವಾಗಿದೆ. ಹೇಗೊ ಏನೊ ಎಂದುಕೊಂಡು ಅವರ ಹೆಸರನ್ನೂ ಘೋಷಿಸಿರಲಿಲ್ಲ. ಆಪದ್ಬಂಧು ಗಾಯಕಿ `ಮಿಂಯಾ ಮಲ್ಹಾರ ಹಾಡಲಾರಂಭಿಸಿದರು. ಶ್ರೋತೃಗಳು ಬಹುವಾಗಿ ಮೆಚ್ಚಿಕೊಂಡರು. ಗಾಯನ ಮುಗಿಯುವವರೆಗೆ ತಾಳಲಾರರು. ಹಾಡುವವರು ಯಾರು, ಯಾರು ಎಂದು ವಿಚಾರಿಸಿ ದೂರವಾಣಿ ಕರೆಗಳು ದಟ್ಟೈಸಿದವು. ಗಾಯನ ಮಧ್ಯದಲ್ಲಿಯೆ ಹಾಡುವವರ ಹೆಸರು ಘೋಷಿಸಬೇಕಾಯಿತು. ಆನಂತರ ಆಕಾಶವಾಣಿಯ ದ್ವಾರ ಮುಕ್ತವಾಯಿತು. ಆಮಂತ್ರಣಗಳು ಸುರಿದವು. ಗಂಗೂಬಾಯಿ ಅವರ ಖ್ಯಾತಿ ಹೆಚ್ಚುತ್ತಿದ್ದಂತೆ ಟೈಮ್ಸ್ ಆಫ್ ಇಂಡಿಯ, ಹಿಂದೂಸ್ಥಾನ್ ಟೈಮ್ಸ್, ಇಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯ ಮೊದಲಾದ ಪತ್ರಿಕೆಗಳು ಇವರ ಬಗ್ಗೆ ಲೇಖನಗಳನ್ನು ಪ್ರಕಟಿಸಿ, ಇವರ ಗಾಯನಕಲೆಯನ್ನು ಮುಕ್ತಕಂಠದಿಂದ ಹೊಗಳಿದವು. 1930ರ ದಶಕದಲ್ಲಿ ಅಂದಿನ ಕಾಲದ ಆದ್ಯ ಧs್ವನಿಮುದ್ರಣ ಸಂಸ್ಥೆಯಾದ ಎಚ್.ಎಂ.ವ್ಹಿ.-ಹಿಜ್ ಮಾಸ್ಟರ್ಸ್ ವ್ಹಾಯ್ಸ್ 78 ಆರ್.ಪಿ.ಎಮ್‍ನಲ್ಲಿ ಗಂಗೂಬಾಯಿಯವರ 12 ಗಾನತಟ್ಟೆಗಳನ್ನು ಹೊರತಂದಿತು. ಶ್ಯಾಮ ಸುಂದರ ತೋರಿ ಆಂಖೆ ಚುರಾನಾ ಎಂಬ ಗಜಲ್, ಬಾ ಅಶತಾ ಕಾಲ ಕಶಾಲಾ ಮತ್ತು ಹರಿ ಚೆ ಗುಣ ಗಾವುಯಾ ಎಂಬೆರಡು ಮರಾಠಿ ಭಾವಗೀತೆಗಳು, ಮಿಂಯಾ ಮಲ್ಹಾರ ರಾಗದಲ್ಲಿ ಕಾಹೇ ಲಾಡಲಿ ಚೀಜು, ಜೋಗಿಯಾ ರಾಗದಲ್ಲಿ ರಾಮ ಹರಿಕಾ ಭೇಧನ ಪಾಯೋ, ಶಂಕರಾ, ದುರ್ಗಾ, ಬಾಗೇಶ್ರೀ, ದೇಸ್ಕಾರ ಇತ್ಯಾದಿ ರಾಗಗಳು. ಇಂದಿಗೂ ಗಂಗೂಬಾಯಿಯವರ ಆ ಹಳೆಯ ಹಾಡುಗಳನ್ನು ಮೆಚ್ಚದಿರುವವರು ಅಪರೂಪ. ಗಂಗೂಬಾಯಿ ಹಾನಗಲ್ಲ ಗಾಯಕಿಯಾಗಿ ಹೆಸರು ಗಳಿಸಿದರು. 

	ಸ್ವಾತಂತ್ರ್ಯಪೂರ್ವದ ಲಾಹೋರ್ ಮತ್ತು ಪೆಷಾವರ್ ಕೇಂದ್ರಗಳನ್ನೊಳಗೊಂಡಂತೆ ಗಂಗೂಬಾಯಿಯವರು ದೆಹಲಿ, ಕಲ್ಕತ್ತ, ಲಖೌನೌ, ಬರೋಡಾ, ಹೈದರಾಬಾದ್, ಮೊದಲಾದ ಪ್ರಸಾರ ಕೇಂದ್ರಗಳಿಂದ ಹಾಡಿದ್ದಾರೆ, ಕಲ್ಕತ್ತ, ಗ್ವಾಲಿಯರ್, ಪ್ರಯಾಗ, ಅಮೃತಸರ, ಕರಾಚಿ, ಗಯಾ, ಡೆಹ್ರಾಡೂನ್, ಆಗ್ರಾ ಮೊದಲಾದ ಮಹಾನಗರಗಳಲ್ಲಿ ಸಾರ್ವಜನಿಕವಾಗಿ ಸಂಗೀತ ಕಛೇರಿ ನಡೆಸಿದ್ದಾರೆ. ಚಲನಚಿತ್ರ ತಾರೆ ನರ್ಗಿಸಳ ತಾಯಿ ಜದ್ದನಬಾಯಿ ಮುಂಬಯಿಯಲ್ಲಿ ಗಂಗೂಬಾಯಿ ಹಾನಗಲ್ಲರ ಗಾಯನ ಕೇಳಿದಂದಿನಿಂದ ಅಭಿಮಾನಿ. ಅವರಿಂದ ಕೋಲ್ಕತಾ ಸಂಗೀತ ಸಮ್ಮೇಳನಕ್ಕೆ (1938) ಆಮಂತ್ರಣ, ಅಲ್ಲಿ ಗಾಯನ ಸರ್ವತ್ರ ಪ್ರಶಂಸೆ ಸಂಗೀತ ಕ್ಷೇತ್ರಗಳಲ್ಲಿ ಪ್ರಸಿದ್ಧರೆನಿಸಿದ ಬಡೆ ಗುಲಾಂ ಆಲಿಖಾನ್, ಅಲ್ಲಾವುದ್ದೀನ್ ಖಾನ್, ಸಿದ್ಧೇಶ್ವರೀ ದೇವಿ, ಪಂಡಿತ-ರವಿಶಂಕರ್, ಬಿಸ್ಮಿಲ್ಲಖಾನ್, ಫೈಯಾಜ್ ಖಾನ್, ಓಂಕಾರನಾಥ ಠಾಕೂರ್ ಮೊದಲಾದವರ ಪ್ರಶಂಸೆಗೆ ಭಾಜನರಾಗಿದ್ದಾರೆ. 1962ರ ಸುಮಾರಿನಲ್ಲಿ ಗಂಗೂಬಾಯಿಯವರು ಭಾರತ ಸಾಂಸ್ಕøತಿಕ ನಿಯೋಗದ ಅಂಗವಾಗಿ ನೇಪಾಳ, ಪಾಕಿಸ್ತಾನಗಳಿಗೆ ಭೇಟಿಕೊಟ್ಟು ಹಿಂದೂಸ್ಥಾನಿ ಗಾಯನದ ಪತಾಕೆ ಹಾರಿಸಿ ಬಂದಿದ್ದಾರೆ.

	ಗಂಗೂಬಾಯಿ ಅವರ ವಿದ್ಯಾಭ್ಯಾಸ 5ನೆಯ ಇಯತ್ತೆಗೆ ನಿಂತಿತು. ಅಂದು ಅಂಬಾಬಾಯಿಗೆ ಮಗಳ ಶಾಲಾಭ್ಯಾಸಕ್ಕಿಂತ ಸಂಗೀತಾಭ್ಯಾಸದ ಕಡೆಗೆ ಹೆಚ್ಚು ಕಾಳಜಿ ಇತ್ತು. ಇಂದು ಗಂಗೂಬಾಯಿಯವರಿಗೆ ಕರ್ನಾಟಕ, ಗುಲಬರ್ಗಾ, ದಿಲ್ಲಿ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿವೆ. ಭಾರತಾದ್ಯಂತ ದೊರೆತ ಸನ್ಮಾನಪತ್ರಗಳು, ಸುವರ್ಣಪದಕಗಳು, ಕಾಣಿಕೆಗಳು, ಉಡುಗೊರೆಗಳು ಅಸಂಖ್ಯ, ರಾಜ್ಯ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷರಾಗಿ (1981) ಸೇವೆ ಸಲ್ಲಿಸಿದ್ದಾರೆ. 

ರಾಜ್ಯ ಸಂಗೀತನಾಟಕ ಪ್ರಶಸ್ತಿ (1962), ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ (1970), ಕೇಂದ್ರ ಸಂಗೀತ ಅಕಾಡೆಮಿ ಪ್ರಶಸ್ತಿ (1973), ತಾನ್‍ಸೇನ್ ಪ್ರಶಸ್ತಿ (1990) ಪುರಸ್ಕøತರಾದ ಗಂಗೂಬಾಯಿ ಅವರಿಗೆ ಕರ್ನಾಟಕ ಸರಕಾರ ರಾಜ್ಯದ ಅತ್ಯಂತ ಶ್ರೇಷ್ಠ ಸಂಗೀತ ಪುರಸ್ಕಾರವಾದ ಕನಕಪುರಂದರ ಪ್ರಶಸ್ತಿ(1990) ನೀಡಿ ಗೌರವಿಸಿದೆ. ಕರ್ನಾಟಕ ವಿಧಾನಸಭೆಗೂ ನಾಮಕರಣ ಸದಸ್ಯರಾಗುವ ಗೌರವವೂ ಇವರಿಗೆ ಸಂದಿದೆ. ಪದ್ಮಭೂಷಣ(1971) ಗೌರವಕ್ಕೆ ಪಾತ್ರರಾಗಿದ್ದ ಇವರಿಗೆ ಪದ್ಮವಿಭೂಷಣ (2000)ದ ಪುರಸ್ಕಾರ. ಕೀರ್ತಿಯ ಶಿಖರ ಮೆಟ್ಟಿರುವ ಕಲಾವಿದೆ. ಕವಿವರ್ಯ ಬೇಂದ್ರೆ ವರ್ಣಿಸಿರುವ `ಗಾಯನ ಗಂಗೆ- ಇದೂ ಗಂಗೂಬಾಯಿ ಅವರಿಗೆ ಅತ್ಯಂತ ಪ್ರೀತಿಯ ಪ್ರಶಸ್ತಿ.
ಸೋದರ ಶೇಷಗಿರಿ ಹಾನಗಲ್ ಅವರು ಮನ್ನಣೆ ಪಡೆದಿರುವ ತಬಲಾ ವಾದಕರಾಗಿದ್ದಾರೆ. ಮಗಳು ಕೃಷ್ಣಾಹಾನಗಲ್ ಶಾಸ್ತ್ರೀಯ ಹಾಗೂ ಲಲಿತ ಸಂಗೀತದಲ್ಲಿ ಹೆಸರು ಮಾಡಿದ್ದಾರೆ. ಈ ಇಬ್ಬರೂ ಗಂಗೂಬಾಯಿಯವರ ಸಂಗೀತ ಕಚೇರಿಗಳಲ್ಲಿ ಸಾಥಿüಗಳು. ಕೃಷ್ಣಾ ಅವರ ಧ್ವನಿ ಗಂಗೂಬಾಯಿ ಅವರ ಗಂಡು ಧ್ವನಿಗೆ ಪೂರಕ. ಗಂಗೂಬಾಯಿ ಅವರ ಶಿಷ್ಯರಲ್ಲಿ ಮಗಳು ಕೃಷ್ಣಾ, ನಾಗನಾಥ ಒಡೆಯರ್, ಸುಲಭಾ ನೀರಲಗಿ ಇದ್ದಾರೆ.

ಮೊದಲಿಗೆ ಗಂಗೂಬಾಯಿ ಅವರ ಧ್ವನಿ ಹೀರಾಬಾಯಿ ಬಡೋದೆಕರ, ಮೊಘುಬಾಯಿ ಕುರ್ಡಿಕರ ಅವರ ಧ್ವನಿಯಂತೆ ಕೋಮಲವಾಗಿತ್ತು. ಅವರ ಹಳೆಯ ಧ್ವನಿಮುದ್ರಿಕೆಗಳನ್ನು ಆಲಿಸಿದರೆ ಇದರ ಅರಿವಾಗುವುದು. ಗಂಟಲಿನ ತೊಂದರೆ ಪದೇ ಪದೇ ತಲೆದೋರಿತು. ಔಷಧಿಯಿಂದ ತಾತ್ಪೂರ್ತಿಕ ಗುಣ ಕಾಣುತ್ತಿತ್ತು. ಹುಬ್ಬಳ್ಳಿಯ ಡಾ.ಜಿ.ವಿ.ಜೋಶಿ `ಗಂಟಲಿನಲ್ಲಿ ದುರ್ಮಾಂಸ ಬೆಳೆದಿದೆ. ಅದನ್ನು ಸುಟ್ಟು ತೆಗೆದುಹಾಕಬೇಕು. ಒಂದು ಸಮಸ್ಯೆ ಇದೆ. ನಿಮ್ಮ ಧ್ವನಿ ಬದಲಾಗಬಹುದು ಎಂದಿದ್ದರು. ಆದರೆ, ಅನ್ಯ ಮಾರ್ಗವಿಲ್ಲ. ವೈದ್ಯರು ದುರ್ಮಾಂಸ ಸುಟ್ಟುಹಾಕಿದರು. ಗಂಟಲು ಬೇನೆ ಗುಣ ಹೊಂದಿತು. ಧ್ವನಿ ಮಾತ್ರ ಬದಲಾಯಿತು. ಇದು ಗಂಗೂಬಾಯಿಯವರ ಗಂಡು ಧ್ವನಿಯ ಗುಟ್ಟು. ಬದಲಾದ ಧ್ವನಿಗೆ ತಕ್ಕಂಥ ಗಾಯನ ಶೈಲಿ ರೂಪಿಸಿಕೊಳ್ಳುವಲ್ಲಿಯೇ ಅವರ ಪ್ರತಿಭೆ ಅಡಗಿದೆ. e್ಞÁನಪೀಠ ಪ್ರಶಸ್ತಿ ಪುರಸ್ಕøತ ಕವಿ ದ.ರಾ. ಬೇಂದ್ರೆ ತಮಾಷೆ ಮಾಡುತ್ತಿದ್ದರು: `ನಿನ್ನ ಗಂಟಲಿನಲ್ಲಿ ಒಬ್ಬ ಶಾಪಗ್ರಸ್ತ ಗಂಧರ್ವ ಕೂತಿದ್ದಾನೆ!.							(ಎನ್.ಕೆ.ಕೆ.; ಪರಿಷ್ಕರಣೆ : ಎಸ್.ಕೆ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ